Monday, December 2, 2013

ಅಮೃತವಾಣಿ - ೩

ಅಧನಂ ದುರ್ಬಲಂ ಪ್ರಾಹುಃ ಧನೇನ ಬಲವಾನ್ ಭವೇತ್ ಸರ್ವಂ ಧನವತಾ ಪ್ರಾಪ್ಯಂ ಸರ್ವಂ ತರತಿ ಕೋಶವಾನ್ |
ಕೋಶೇನ ಧರ್ಮಃ ಕಾಮಶ್ಚ ಪರಲೋಕಸ್ತಥಾ ಹ್ಯಯಮ್ ತಂ ಚ ಧರ್ಮೇಣ ಲಿಪ್ಸೇತ ನಾಧರ್ಮೇಣ ಕದಾಚನ ||
ಬಲಾಬಲಗಳ ತೀರ್ಮಾನವಾಗುವುದೇ ಧನದಿಂದ, ಈ ಲೋಕದಲ್ಲಿ ಧನವಿಲ್ಲದವನನ್ನು ದುರ್ಬಲನೆಂದು ಕರೆಯುತ್ತಾರೆ. ಧನವಿದ್ದವನು ಬಲಶಾಲಿಯೆನಿಸುತ್ತಾನೆ. ಸನ್ಮಾನ, ಗೌರವ, ಪ್ರಶಸ್ತಿ, ಮುಂತಾದವುಗಳು ಹಣವಂತನಿಗೇ ಲಭಿಸುತ್ತವೆ. ಧನಸಮೃದ್ಧಿಯುಳ್ಳವನು ಎಲ್ಲ ಕಷ್ಟಗಳಿಂದಲೂ ಮುಕ್ತನಾಗುತ್ತಾನೆ. ಅರ್ಥಸಂಪಾದನೆಯಿಂದ ಧರ್ಮ ಹಾಗೂ ಕಾಮಗಳು, ಇಹಲೋಕ ಮತ್ತು ಪರಲೋಕಗಳು ಪ್ರಾಪ್ತವಾಗುತ್ತವೆ.
ಈ ವಿ‌ಷಯದಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ ಧನವನ್ನು ಧರ್ಮ, ನ್ಯಾಯಗಳಿಂದಲೇ ಗಳಿಸಬೇಕು. ಯಾವಕಾರಣದಿಂದಲೂ ಅಧರ್ಮ, ಅನ್ಯಾಯಗಳಿಂದ ಧನ ಸಂಪಾದಿಸಬಾರದು.
ಅಧರ್ಮದ ಧನ ಫಲಿಸುವುದೂ ಇಲ್ಲ.
  
 ~ ಶಾಂತಿಪರ್ವ ~ ಮಹಾಭಾರತ/ ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ


ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ

Friday, November 8, 2013

ಅಮೃತವಾಣಿ - ೨

ಯಂ ಮಾತಾಪಿತರೌ ಕ್ಲೇಶಂ ಸಹೇತೇ ಸಂಭವೇ ನೃಣಾಂ |
ನ ತಸ್ಯ ನಿಷ್ಕೃತಿಃ ಶಕ್ಯಾ ಕರ್ತುಂ ವರ್ಷಶತೈರಪಿ || 
ಮಕ್ಕಳು ಹುಟ್ಟುವಾಗ ತಂದೆ-ತಾಯಿಗಳು ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಹುಟ್ಟದಿದ್ದರೆ ಅದಕ್ಕಾಗಿ ಕೊರಗುತ್ತಾರೆ.
ಹುಟ್ಟಿದ ಮೇಲೆ ಅವರನ್ನು ದೊಡ್ಡ ವ್ಯಕ್ತಿಗಳಾಗಿ ಹೇಗೆ ಬೆಳೆಸುವುದು ಎಂದು ಆಲೋಚಿಸುತ್ತಾರೆ. 
ಅದಕ್ಕಾಗಿ ತಮ್ಮ ಪ್ರಾಣ-ಧನಗಳನ್ನು ಪರಿಗಣಿಸದೇ ಜೀವನದುದ್ದಕ್ಕೂ ಹೋರಾಡುತ್ತಾರೆ. ಮಕ್ಕಳ ಅಭ್ಯುದಯಕ್ಕಾಗಿ ಕಂಡ ಕಂಡ ದೈವಗಳಿಗೆ ಹರಕೆ ಹೊರತ್ತಾರೆ. ಅಭೀಷ್ಟ ಸಿದ್ಧಿಯಾದರೆ ಅವರಷ್ಟು ಸಂಭ್ರಮ ಪಡುವವರೇ ಇಲ್ಲ.
ಇಂಥ ತಂದೆ ತಾಯಿಗಳ ಋಣವನ್ನು ತೀರಿಸಲು ಮಕ್ಕಳಾದವರು ನೂರು ವರ್ಷ ಸೇವೆ ಮಾಡಿದರೂ ಸಾಧ್ಯವಿಲ್ಲ. 

~ ಮನುಸ್ಮೃತಿ/ ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ 

ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ 

Friday, November 1, 2013

ಅಮೃತವಾಣಿ - ೧

ಲೋಕದ್ವಯಪ್ರತಿಭಯೈಕನಿದಾನಮೇತದ್ಧಿಕ್ ಪ್ರಾಣಿನಾಂ ಋಣಮಹೋ ಪರಿಣಾಮಘೋರಮ್ |
ಏಕಃ ಸ ಏವ ಹಿ ಪುಮಾನ್ ಪರಮಸ್ತ್ರಿಲೋಕೇ ಕ್ರುದ್ಧಸ್ಯ ಯೇನ ಧನಿಕಸ್ಯ ಮುಖಂ ನ ದೃಷ್ಟಮ್ ||
ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಮನುಷ್ಯರಿಗೆ ಘನಘೋರವಾದ ದುಃಖಾಂತ್ಯದ ದರ್ಶನವನ್ನು ಮಾಡಿಸುವ ಭಯದ ಮೂಲವೇ ಸಾಲ.
ಎಲ್ಲ ಬಾಧೆಗಳಿಗಿಂತಲೂ ಸಾಲಬಾಧೆ ಭಯಂಕರವಾದದ್ದು. ಕೋಪ ಮಾಡಿಕೊಂಡು ಜನರ ಮಧ್ಯದಲ್ಲಿಯೇ ಅವಮಾನ ಮಾಡುವ, ಸಾಲ ಕೊಟ್ಟ ಶ್ರೀಮಂತನ ಕೆಂಗಣ್ಣಿಗೆ ಯಾವನು ಗುರಿಯಾಗುವುದಿಲ್ಲವೋ ಆ ಮನುಷ್ಯನು ಮೂರು ಲೋಕಗಳಲ್ಲಿಯೇ ಧನ್ಯ ಎಂದು ತಿಳಿಯಬೇಕು.
ಇದಕ್ಕೆ ಪೂರಕವಾಗಿ ಸಾಲವನ್ನು ತರುವಾಗ ಹಾಲು-ಹಣ್ಣುಂಬಂತೆ, ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞ ತನ್ನ ವಚನದಲ್ಲಿ ಮಾರ್ಮಿಕವಾಗಿ ನುಡಿದಿದ್ದಾನೆ. 
 ~ ಚಂಡಕೌಶಿಕ ನಾಟಕ / ಸಂಗ್ರಹ, ವ್ಯಾಖ್ಯಾನ : ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ