Sunday, September 13, 2015

ಅಮೃತವಾಣಿ - ೯

~ ಅಧ್ಯಾತ್ಮ ~

ಆತ್ಮಾನಂ ಅನಭಿಜ್ಞಾಯ ವಿವೇಕ್ತುಂ ಯೋsನ್ಯದಿಚ್ಛತಿ |
ತೇನ ಭೌತೇನ ಕೀಂ ವಾಚ್ಯಂ ಪ್ರಶ್ನೇsಸ್ಮಿನ್ ಕೋ ಭವಾನಿತಿ ||

ತಾನು ಯಾರು? ಎಲ್ಲಿಂದ ಬಂದಿದ್ದೇನೆ? ಯಾಕೆ ಬಂದಿದ್ದೇನೆ? ಎಂದು ತಿಳಿಯುವ ಗೋಜಿಗೆ ಹೋಗದೆ ಕೇವಲ ಪರವಸ್ತುವಿನ ಬಗ್ಗೆ, ಪರರ ಬಗ್ಗೆ, ಪರವೂರಿನ ಬಗ್ಗೆ ತಿಳಿಯಲು ಹಾತೊರೆಯುವ ವ್ಯಕ್ತಿಗೆ, ನೀನು ಯಾರು? ಎಂದು ಪ್ರಶ್ನಿಸಿದರೆ ಅವನು ತನ್ನ ಬಗ್ಗೆ ತಿಳಿಯದಿದ್ದರೆ ಬದುಕಿಯೂ ಏನು ಪ್ರಯೋಜನ? ಬದುಕಿರುವಾಗ ಆತ್ಮಸ್ವರೂಪವನ್ನು ತಿಳಿಯುವುದು ಅತ್ಯಂತ ಮುಖ್ಯ. ಹಿರಿಯರು ಇದನ್ನೇ ಅಧ್ಯಾತ್ಮ ಎಂದು ಕರೆಯುತ್ತಾರೆ.


~ ಅಭಿನವಗುಪ್ತ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
| ಮೂಲ ಸಂಗ್ರಹ: ವಿಜಯವಾಣಿ

Friday, September 11, 2015

ಅಮೃತವಾಣಿ - ೮

~ ಸಜ್ಜನ ~

ಕೃಪಾಲುರಕೃತದ್ರೋಹಃ ತಿತಿಕ್ಷುಃ ಸರ್ವದೇಹಿನಾಮ್ |
ಸತ್ಯಸಾರೋs ನವದ್ಯಾತ್ಮಾ ಸಮಃ ಸರ್ವೋಪಕಾರಕಃ ||

ಸಜ್ಜನನು ಕೃಪೆಯ ಸಾಕಾರವಾಗಿರುತ್ತಾನೆ. ಅವನು ಯಾರ ಬಗ್ಗೆಯೂ ವೈರಭಾವ ಹೊಂದದೆ, ಅವರ ಸದ್ಗುಣಗಳನ್ನು ಎಲ್ಲರಿಗೂ ತಿಳಿಸುತ್ತಾನೆ. ಅಸಹನೀಯ ದುಃಖ ಉಂಟಾದರೂ ಅದನ್ನು ತೋರ್ಪಡಿಸದೆ ಸಹಿಸುತ್ತ ದೇವರನ್ನು ನೆನೆಯುತ್ತ ಸಂತೋಷದಿಂದಿರಲು ಪ್ರಯತ್ನಿಸುತ್ತಾನೆ. ಪಾಪಕೃತ್ಯಗಳಿಂದ ದೂರವಾಗಿರುತ್ತಾನೆ.
ಮನಸ್ಸಿನಲ್ಲಿಯೂ ಅಂಥ ವಿಚಾರ ಮಾಡದೆ ಎಲ್ಲರಿಗೂ ಒಳ್ಳೆಯದಾಗಲೆಂದು ಸದಾ ಆಶಿಸುತ್ತಿರುತ್ತಾನೆ.

~ ಶ್ರೀಕೃಷ್ಣಭಾರತೀ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

| ಮೂಲ ಸಂಗ್ರಹ: ವಿಜಯವಾಣಿ